ಕೂಡಕ್ಷರ
 	ಸಾಮಾನ್ಯವಾಗಿ ಯಾವುದಾದರೂ ಹೆಸರನ್ನು ಪ್ರತಿನಿಧಿಸಲು ಎರಡು ಅಥವಾ ಹೆಚ್ಚಿನ (ಮೊದಲ) ಅಕ್ಷರಗಳನ್ನು ಪರಸ್ಪರ ಹೆಣೆದಂತೆ ರಚಿಸಿರುವ ಹಾಗೂ ಮೊಹರಿನ ಮುದ್ರೆಯಲ್ಲಿ ಅಥವಾ ಅಧಿಕೃತ ಪತ್ರಗಳಲ್ಲಿ ಉಪಯೋಗಿಸುವ ವಿಶೇಷ ಚಿಹ್ನೆ (ಮೊನೋಗಾಂ). ಗ್ರೀಕ್ ಮತ್ತು ರೋಮನರ ಕಾಲದಲ್ಲಿ ನಾಣ್ಯಗಳ ಮೇಲೆ, ಪದಕಗಳ ಮೇಲೆ ಹಾಗೂ ಸಾರ್ವಜನಿಕ ಸ್ಮಾರಕಗಳ ಮೇಲೆ ಈ ಸಾಂಕೇತಿಕ ಕೂಡಕ್ಷರಗಳನ್ನು ವಿಶೇಷವಾಗಿ ಬಳಸುತ್ತಿದ್ದರು. ಯಾವ ರಾಜರಿಗಾಗಿ, ಅಥವಾ ಯಾವ ಸ್ಥಳದಲ್ಲಿ ನಾಣ್ಯವನ್ನು ಮುದ್ರಿಸಿದೆಯೆಂಬ ಗುರುತು ಇದರಲ್ಲಿ ಇರುತ್ತಿತ್ತು. ಮುದ್ರಣದ ಆರಂಭ ಕಾಲದ ಪುಸ್ತಕಗಳಲ್ಲಿ ಮುದ್ರಕರ ವಿಶಿಷ್ಟ ಚಿಹ್ನೆಯಾಗಿ ಸಹ ಇವು ಬಳಸಲ್ಪಡುತ್ತಿದ್ದು, ಆ ಪುಸ್ತಕಗಳ ಸರಿಯಾದ ಪತ್ತೆಗೆ ಇವು ಉಪಯುಕ್ತವಾಗಿವೆ. ಚಿತ್ರಕಲೆಯಲ್ಲೂ ಕೆತ್ತನೆ ಕೆಲಸದಲ್ಲೂ ಕಲೆಗಾರರ ಅಂಕಿತವಾಗಿ ಇವು ಉಪಯೋಗಿಸಲ್ಪಟ್ಟಿವೆ. ಮಧ್ಯಯುಗದಲ್ಲಿಯೂ ಈ ಕೂಡಕ್ಷರಗಳ ಹೊಸ ಹೊಸ ಮಾದರಿಗಳು ಕ್ರೈಸ್ತ ಮಠದ ಕಲೆ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಸಮೃದ್ಧವಾಗಿ ಹೊರಬರುತ್ತಿದ್ದವು. ಪ್ರತಿಯೊಬ್ಬ ಗಣ್ಯಪುರುಷನಿಗೂ ಸುಸಂಸ್ಕøತನೆನ್ನಿಸಿಕೊಂಡವನಿಗೂ ಕಲಾವಿದನಿಗೂ ತನ್ನದೇ ಆದ ಇಂಥ ಸಂಕೇತವಿರುತಿತ್ತು. ವಂಶಲಾಂಛನ ದ್ಯೋತಕಗಳನ್ನು ಬಳಸಲು ಅಧಿಕಾರವಿರದಿದ್ದುದರಿಂದ ವರ್ತಕರು ಅವುಗಳ ಬದಲು ತಮ್ಮದೇ ಆದ ನಕ್ಷೆಯೊಡಗೂಡಿದ ಕೂಡಕ್ಷರದ ಮುದ್ರಿಕೆಗಳನ್ನು ಉಪಯೋಗಿಸುತ್ತಿದ್ದರು. ಚಂಡಮಾರುತಗಳಿಂದಲೂ ಆಕಸ್ಮಿಕ ಅನಾಹುತಗಳಿಂದಲೂ ರಕ್ಷಣೆಯಿರಲೆಂದೋ ಅಥವಾ ತಮ್ಮ ವಸ್ತುಗಳನ್ನು ಪ್ರಾಚ್ಯ ಮಹಮ್ಮದೀಯ ವರ್ತಕರ ವಸ್ತುಗಳಿಂದ ಭಿನ್ನವೆಂದು ತೋರಿಸಿಕೊಳ್ಳಲೋ ತಮ್ಮ ಕ್ರೈಸ್ತ ಕುರುಹಾಗಿ ಶಿಲುಬೆಯ ಗುರುತನ್ನು ಸಾಧಾರಣವಾಗಿ ಅದರಲ್ಲಿ ಅಳವಡಿಸಿರುತ್ತಿದ್ದರು. ಡಚ್ ವಾಣಿಜ್ಯ ಸಂಸ್ಥೆಗಳು ತಮ್ಮ ಇಂಥ ಸಂಕೇತಗಳನ್ನು ಬಾವುಟಗಳ ಮೇಲೆ ಪ್ರದರ್ಶಿಸುತ್ತಿದ್ದರು. ಹೀಗೆ ವರ್ತಕನೊಬ್ಬನ ಕುರುಹನ್ನುಳ್ಳ 16ನೆಯ ಶತಮಾನದ ಸೊಗಸಾದ ಚಿನ್ನದುಂಗುರವೊಂದು ಬ್ರಿಟಿಷ್ ಪ್ರಾಚೀನ ವಸ್ತುಸಂಗ್ರಹ ಶಾಲೆಯಲ್ಲಿ ಪ್ರದರ್ಶಿತವಾಗಿದೆ. ಅತ್ಯಂತ ಸುಪ್ರಸಿದ್ಧವಾದ ಧಾರ್ಮಿಕ ಕೂಡಕ್ಷರ ಚಿಹ್ನೆಯೆಂದರೆ ಗ್ರೀಕ್ ಭಾಷೆಯಲ್ಲಿ ಕ್ರಿಸ್ತ ಎಂಬ ಹೆಸರಿನ ಮೊದಲೆರಡಕ್ಷರಗಳು ಒಂದಕ್ಕೊಂದು ಹೆಣೆದುಕೊಂಡಿರುವುದು. ಲೌಕಿಕ ಚಿಹ್ನೆಗಳಲ್ಲಿ ಪ್ರಸಿದ್ಧವಾದವುಗಳಲ್ಲಿ ಎರಡನೆಯ ಹೆನ್ರಿ ಮತ್ತು ಡಯನಾ ಡಿ ಪೊಯಿಷರ್ಸ್ ಅವರ ಸಂಯೋಜಿತ ಕೂಡಕ್ಷರವನ್ನು ಹೆಸರಿಸಬಹುದು. ಆ ದೊರೆ ಕಟ್ಟಿಸಿದ ಕಟ್ಟಡಗಳ ಮೇಲೆ, ಅರಮನೆಯ ಪುಸ್ತಕ ಭಂಡಾರದ ಪುಸ್ತಕಗಳ ರಟ್ಟಿನ ಮೇಲೆ ಇವರ ಚಿಹ್ನೆಯನ್ನು ಬಿಲ್ಲು, ಬತ್ತಳಿಕೆ ಮತ್ತು ಡಯಾನ ಅಧಿದೇವತೆಯ ಬಾಲಚಂದ್ರಾಕಾರದ ಗುರುತುಗಳು ಇವುಗಳೊಡನೆ h ಮತ್ತು d ಅಕ್ಷರಗಳು ಹೆಣೆದು ಕೊಂಡಿರುವುದನ್ನು ಕಾಣಬಹುದು. ರೆಂಬ್ರಾಂಡ್ಟ್ ಮತ್ತು ಡ್ಯೂರರ್ ಇವರ ಚಿಹ್ನೆಗಳನ್ನು ಕಲಾವಿದರ ಕೂಡಕ್ಷರಗಳಲ್ಲಿ ಪ್ರಸಿದ್ಧವಾದದ್ದೆಂದು ಪರಿಗಣಿಸಬಹುದು.

(ಕೆ.ವಿ.ಎಸ್.)